Thursday, July 24, 2014

ಏಕೆ ಬಹುತೇಕ ಎಲ್ಲರೂ ದೇವರ ಇರುವಿಕೆಯನ್ನು ನಂಬುತ್ತಾರೆ?



ಏಕೆ ಕೆಲವು ಜನರಷ್ಟೇ ನಾಸ್ತಿಕರು? ಏಕೆ ಬಹುತೇಕ ಎಲ್ಲರೂ ದೇವರ ಇರುವಿಕೆಯನ್ನು ನಂಬುತ್ತಾರೆ?

          ತುಂಬ ಚಿಕ್ಕವರಿದ್ದಾಗ ಎಲ್ಲರಿಗೂ ಪಾಲಕರ ಮಾತೇ ವೇದವಾಕ್ಯ, ಅಂತಿಮ. ಇದು ನಿಜವೂ ಹೌದು, ಸರಿಯೂ ಹೌದು. ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ಉಪಕಾರಿ-ಅಪಕಾರಿ ಇವೆಲ್ಲವುಗಳ ನಡುವಿನ ವ್ಯತ್ಯಾಸ ಮೊದಲು ತಿಳಿಹೇಳುವುದು ಪಾಲಕರು. ಪಾಲಕರ ಸಲಹೆ ಸೂಚನೆಗಳು ಯಾವಾಗಲು ನಂಬಲರ್ಹ ಎಂಬ ಭಾವನೆಯಲ್ಲೇ ಮಕ್ಕಳು ಬೆಳೆಯುತ್ತಾರೆ, ಅದೇ ಭಾವನೆಯಲ್ಲೇ ಪಾಲಕರು ಮಕ್ಕಳನ್ನು ಬೆಳೆಸುತ್ತಾರೆ ಕೂಡ. ‘ಉರಿಯುತ್ತಿರುವ ದೀಪವನ್ನು ಮುಟ್ಟಬೇಡ, ಮುಟ್ಟಿದರೆ ಕೈ ಸುಡುವುದು’ ಎಂದು ಹೇಳುವ ಅದೇ ಪಾಲಕರು, ‘ಪ್ರತಿದಿನ ದೇವರಿಗೆ ಕೈ ಮುಗಿದರೆ ದೇವರು ಒಳ್ಳೆಯದು ಮಾಡುತ್ತಾನೆ’ ಎಂದೂ ಹೇಳುತ್ತಾರೆ. ಮಗು ಪಾಲಕರ ಮೊದಲನೇ ಹೇಳಿಕೆಯನ್ನು ಪರೀಕ್ಷಿಸಬಹುದು, ಉತ್ತರ ಕಂಡುಕೊಳ್ಳಬಹುದು. ಆದರೆ ಎರಡನೆ ಹೇಳಿಕೆಯನ್ನು ಮಗು ಹೇಗೆ ಪರೀಕ್ಷೆ ಮಾಡೀತು? ದೇವರು ನಿಜವಾಗಲು ಇರುವನೇ? ತಾನು ಇಲ್ಲಿ ದೇವರಿಗೆ ಕೈ ಮುಗಿದರೆ ಅದು ದೇವರಿಗೆ ಹೇಗೆ ಗೊತ್ತಾಗುವುದು ಎಂದು ಮಗುವಿಗೆ ತಿಳಿಯುವುದು ಹೇಗೆ? ಇದರ ಪರೀಕ್ಷೆ ಹೇಗೆ? ಮಗುವಿಗೆ ಉತ್ತರ ಸಿಗುವುದಿಲ್ಲ. ಹೀಗಾಗಿ, ದೀಪದ ಸುಡುವಿಕೆ ಎಷ್ಟು ವಾಸ್ತವವೋ, ದೇವರ ಕೃಪೆ ಕೂಡ ಅಷ್ಟೇ ವಾಸ್ತವವೆಂದು ಮಗು ನಂಬುತ್ತದೆ. ಮೊದಲೇ ಹೇಳಿದಂತೆ ಪಾಲಕರ ಹೇಳಿಕೆ ಮಗುವಿಗೆ ಯಾವಾಗಲೂ ನಂಬಲರ್ಹ.
          ಏಕೆ ಪಾಲಕರು ದೀಪದ ಸುಡುವಿಕೆ ಎಂಬುದು ‘ವಾಸ್ತವ’, ದೇವರ ಇರುವಿಕೆ ಎಂಬುದು ‘ನಂಬಿಕೆ’ ಎಂದು ಹೇಳುವುದಿಲ್ಲ? ಒಂದು ನಂಬಿಕೆಯು ಉಳಿಯಲು ಅದು ತಲೆತಲಾಂತರದ ಮೂಲಕ ಸಾಗಬೇಕು. ದೇವರ ಮೇಲಿನ ನಂಬಿಕೆ ಕೂಡ ಹಾಗೆಯೇ, ಪಾಲಕರಿಂದ ಮಕ್ಕಳಿಗೆ ಸಾಗಿದ್ದು. ಇಲ್ಲಿ ನಂಬಿಕೆಯನ್ನು ಪ್ರಶ್ನಿಸಲು, ಪರೀಕ್ಷಿಸಲು ಅಧಿಕಾರವೂ ಇಲ್ಲ, ಅವಕಾಶವೂ ಇಲ್ಲ. ಹಾಗಾಗಿ ನಂಬಿಕೆಗೆ ಸಾವಿಲ್ಲ. ಸಾವಿರ ವರ್ಷಗಳ ಹಿಂದೆಯೂ ಜನರು ದೇವರನ್ನು ನಂಬಿದ್ದರು. ಇಂದಿಗೂ ನಂಬುತ್ತಾರೆ. ಆದರೆ ವಾಸ್ತವತೆ ಹಾಗಲ್ಲ. ವಾಸ್ತವತೆ ಸಾಗಲು ತಲೆತಲಾಂತರ ಅಥವಾ ಇನ್ನಾವುದೇ ಮಾಧ್ಯಮದ ಅಗತ್ಯವಿಲ್ಲ. ನಂಬಿಕೆಯಂತೆ ವಾಸ್ತವವನ್ನು ಮನುಷ್ಯ ಸೃಷ್ಟಿಸಿದ್ದೂ ಅಲ್ಲ.

          ಒಮ್ಮೆ ದೇವರ ಇರುವಿಕೆಯೆನ್ನು ನಂಬಲು ಶುರುಮಾಡಿದ ಮೇಲೆ, ಮಗು ತನ್ನ ಕಲ್ಪನಾ ಪ್ರಪಂಚವನ್ನು ಆ ನಂಬಿಕೆಯ ತಳಹದಿಯ ಮೇಲೆಯೇ ಕಟ್ಟಲು ಶುರುಮಾಡುತ್ತದೆ. ತಾನು ಹುಟ್ಟಿದ್ದು, ಮಳೆ ಬರುವುದು, ಸೂರ್ಯ ಬೆಳಗುವುದು ಎಲ್ಲವೂ ದೇವರ ಕೃಪೆಯಿಂದ ಎಂದೇ ನಂಬುತ್ತದೆ. ತನಗೆ ಒಳ್ಳೆಯದಾಗಬೇಕೆಂದು ದೇವರನ್ನು ಪೂಜಿಸಲು ಆರಂಭಿಸುತ್ತದೆ. ಹೀಗೆ ಬೆಳೆದು ದೊಡ್ಡವನಾದ ಮೇಲೆ ಅವನ ವಿಶಾಲ ವ್ಯಕ್ತಿತ್ವದ ಬೇರುಗಳು ಜೀವಿಸುವುದು ‘ದೇವರ ಇರುವಿಕೆಯ’ ನಂಬಿಕೆಯಲ್ಲಿ. ಅವನು ಮತ್ತೆಂದಿಗೂ ದೇವರ ಇರುವಿಕೆ ಎಷ್ಟು ವಾಸ್ತವ ಎಂದು ಕೇಳುವ ಗೋಜಿಗೆ ಹೋಗುವುದಿಲ್ಲ. ದೇವರನ್ನು ಅವನು ಅಷ್ಟು ಬಲವಾಗಿ ನಂಬಿರುತ್ತಾನೆ. ಮುಂದೆ ಮದುವೆಯಾಗಿ ಮಕ್ಕಳಾದ ಮೇಲೆ ಅವನು ತನ್ನ ಮಗುವಿಗೂ ತನ್ನ ನಂಬಿಕೆಯನ್ನು ಕಲಿಸುತ್ತಾನೆ. ಥೇಟ್ ಅವನ ಪಾಲಕರು ಅವನಿಗೆ ಕಲಿಸಿದ ಹಾಗೆ!!

          ಹೀಗಾಗಿ ಬಹುತೇಕ ಎಲ್ಲರೂ ದೇವರನ್ನು ನಂಬುತ್ತಾರೆ. ಅವರ ಪ್ರಕಾರ ದೇವರನ್ನು ಧಿಕ್ಕರಿಸಿದರೆ ತಮ್ಮ ಪಾಲಕರನ್ನೇ ಧಿಕ್ಕರಿಸಿದಂತೆ! ದೇವರನ್ನು ನಂಬದಿರಲು ಅವರಿಗೆ ಎಷ್ಟೇ ಕಾರಣಗಳು ಸಿಕ್ಕರೂ ಅವರಿಗೆ ದೇವರನ್ನು ನಂಬದೇ ಇರಲು ಸಾಧ್ಯವಿಲ್ಲ. ಏಕೆಂದರೆ ದೇವರ ಅನುಪಸ್ತಿತಿ ಅವರ ವ್ಯಕ್ತಿತ್ವವನ್ನೇ ಅಲುಗಾಡಿಸಬಲ್ಲದು!!
ಹಾಗಾದರೆ ಇಲ್ಲಿ ನಂಬಿಕೆ ಯಾವುದು? ವಾಸ್ತವ ಯಾವುದು? 

ದೇವರಿದ್ದಾನೆ ಎಂಬುವುದು ನಂಬಿಕೆ. ದೇವರಿಲ್ಲ ಎಂಬುವುದು ವಾಸ್ತವ.


ದೇವರು ಅವರಿಗೆ ಒಳ್ಳೇದು ಮಾಡಲಿ!!

Wednesday, July 23, 2014

ದೇವರು, ದೇವರೂ, ದೇವರೇ?

         ಹುಟ್ಟಿನಿಂದ ಎಲ್ಲರೂ ನಾಸ್ತಿಕರು! ಸುತ್ತಮುತ್ತಲಿನವರೇ ಅವರನ್ನು ಆಸ್ತಿಕರನ್ನಾಗಿ ಮಾಡೋದು. ದೊಡ್ಡೋರಾಗ್ತಾ ಆಗ್ತಾ ಕೆಲವರಿಗೆ ದೇವರೆಂಬ ಕಾನ್ಸೆಪ್ಟ್ ಅರ್ಥ ಆಗೋಲ್ಲ ಅಥವಾ ಇಷ್ಟ ಆಗೋಲ್ಲ ಅಥವಾ ತುಂಬಾ ಪ್ರಾಕ್ಟಿಕಲ್ ಅನ್ಸೋಲ್ಲ. ಅವರೇ ನಾಸ್ತಿಕರಾಗೋದು ನನ್ನ ಪ್ರಕಾರ!. ಹೀಗೆ ಯಾವಾಗಾದ್ರೂ ಫ್ರೆಂಡ್ಸ್ ಜೊತೆ ಕೂತು ಮಾತಾಡೋವಾಗ ಅಕಸ್ಮಾತಾಗಿ ನಾಸ್ತಿಕತೆಯ ವಿಷಯ ಬರುತ್ತೆ. ಆವಾಗಲೇ ಈ argueಗಳು ಶುರುವಾಗೋದು. Argueಇಂದ ಯಾರ opinionsನೂ change ಮಾಡೋಕಾಗಲ್ಲ ಅಂತ ಗೊತ್ತಿದ್ರು argue ಮಾಡ್ತೀವಿ. Atheism ಅನ್ನೋದು argue topic ಆಗಿದ್ದಾಗ conversationnu ಹೆಂಗಿತ್ತು ಅಂತ ಬರ್ದಿದೀನಿ ಇಲ್ಲಿ.


1) ದೇವರಿಲ್ಲ ಅಂತ ಪ್ರೂವ್ ಮಾಡು ನೋಡೋಣ !?

          ಇಂಥ ಪ್ರಶ್ನೆ ಕೇಳೋರು ಒಂದು ಥರದ ವಿಶೇಷ ವಾನರ ಜಾತಿಗೆ ಸೇರಿದವರೆಂದು ನನ್ನ ಅನುಮಾನ (Dawn of the planet of the Apes is good movie, by the way). ಇರೋದನ್ನ ಇದೆ ಅಂತ ಪ್ರೂವ್ ಮಾಡ್ಬೋದು, ಇಲ್ದೆ ಇರೋದನ್ನ ಇಲ್ಲ ಅಂತ ಹೆಂಗೆ ಪ್ರೂವ್ ಮಾಡಬೇಕೋ ನಂಗಂತೂ ಗೊತ್ತಿಲ್ಲ! ದೇವರಿದ್ದಾನೆ ಅಂತ ಹೇಳ್ತಿರೋದು ನೀನು ಮಾರಾಯ, ಇದಾನೆ ಅಂತ ಪ್ರೂವ್ ಮಾಡೋದು ನಿನ್ನ ಕೆಲಸವಪ್ಪ, ನನ್ನದಲ್ಲ ಅಂತ ಹೇಳುವಷ್ಟರಲ್ಲಿ ನನ್ನ disposal cup ಖಾಲಿ!

2) ‘ನಾನು ಪ್ರೂಫ್ ಕೊಡ್ತೀನಿ, ನಮ್ಮ ಧಾರ್ಮಿಕ ಗ್ರಂಥದಲ್ಲಿ ಏನಿದೆ ಅಂದ್ರೆ.....’

         ಸಮಾಧಾನ ಮಾಡ್ಕೋಪಾ. ನಿಮ್ಮ ಆ ಪುಸ್ತಕ ಆಕಾಶದಿಂದ ಉದುರಿ ಬಿದ್ದಿದ್ದು ಅಲ್ಲ. ಅದನ್ನು ಬರೆದಿದ್ದು ನನ್ನ ನಿನ್ನಂಥ ಮನುಷ್ಯನೇ. ಹಾಗಾಗಿ ಅದರಲ್ಲಿ ಇರೋದೆಲ್ಲ ಮನುಷ್ಯನ ಕಲ್ಪನೆಯಿಂದ ಬಂದಿದ್ದು ಅಷ್ಟೇ. ನೀನು ಏನು ಹೇಳ್ತಿದಿಯ ಅಂದ್ರೆ Batman ನಿಜವಾಗಲು ಇದಾನೆ ಏಕೆಂದರೆ ನೀನು Batman Comics ಓದಿದೀಯ!! 

3)  Universe, cosmos ನ ಸೃಷ್ಟಿ ಮಾಡಿರೋರು ಯಾರು? ನಿನ್ನ science ಯಾಕೆ ಉತ್ತರ ಕೊಡ್ತಿಲ್ಲ ಇದಕ್ಕೆ ?

         ಒಂದಲ್ಲ ಒಂದು ದಿನ ವಿಜ್ಞಾನ ಇದಕ್ಕೆಲ್ಲ ಖಂಡಿತ ಉತ್ತರ ಕೊಡುತ್ತೆ. ವಿಜ್ಞಾನ ಎಂದಿಗೂ ನನಗೆಲ್ಲ ಗೊತ್ತು ಎಂದು ಯಾವತ್ತೂ ಹೇಳಿಲ್ಲ. (ಆ ಥರ ಹೇಳೋದು ಕೇವಲ Religion) . ಎವಿಡೆನ್ಸ್ ಅನ್ನೋದು ವಿಜ್ಞಾನದ ಅವಿಭಾಜ್ಯ ಅಂಗ. ವಿಜ್ಞಾನ ಉತ್ತರ ಹುಡುಕುತ್ತೆ. ಆದರೆ ವಿಜ್ಞಾನಕ್ಕೆ ‘ಗೊತ್ತಿಲ್ಲ’ ಅಂದ ತಕ್ಷಣ ನೀನು ಅಲ್ಲಿ ‘ದೇವರ’ನ್ನು ಅಲ್ಲಿ replace ಮಾಡೋ ಅಗತ್ಯವಿಲ್ಲ!! ಬರಿ ನೂರು ವರ್ಷದಲ್ಲಿ ವಿಜ್ಞಾನ ಸಾಕಷ್ಟು ಸಾಧಿಸಿದೆ, ಉತ್ತರಿಸಿದೆ. ಕಲ್ಲು ಮೇಲಿಂದ ಕೆಳಗೆ ಬೀಳೋದು ದೇವರ ಸೃಷ್ಟಿ ಅಂತ ಹೇಳಿದ್ದು ನೀವು. ಅದು Gravity ಅಂತ ಗೊತ್ತಾದ ಮೇಲೆ ಸುಮ್ಮನಾದಿರಿ. ಹಾಗೆ ಇದೂ ಕೂಡ!!! 

4) ದೇವರನ್ನು ನಂಬದವನು ನೀನು, ನಿನಗೆ ಒಳ್ಳೆತನ, ಮಾನವೀಯತೆ ಏನು ಎಂಬುದು ಗೊತ್ತೇ?

         ನೀನು ಒಳ್ಳೆವನಾಗೋಕೆ ದೇವರನ್ನು ನಂಬೋ ಅಗತ್ಯವಿಲ್ಲ ಕಣಯ್ಯಾ. ನಾನು ಎಷ್ಟು ಒಳ್ಳೆವನೋ ನಂಗಂತೂ ಗೊತ್ತಿಲ್ಲ. ಆದರೂ ನಂಗೆ ಒಳ್ಳೆತನ, ಮಾನವೀಯತೆ ಏನೆಂದು ಗೊತ್ತಿದೆ. ಏಕೆಂದರೆ ಇದು ಗೊತ್ತಾಗೋದು ನನ್ನ Empathy ಇಂದ. Empathy ಅನ್ನೋದು ಮನುಷ್ಯನಿಗೆ ಹುಟ್ಟಿನಿಂದ ಬರೋದು. 

5) ದೇವರು ಮಾಡಿದ ಪವಾಡಗಳೆಲ್ಲ ಏನು? ಆ ಪವಾಡಗಳೆಲ್ಲ ಹೇಗೆ ನಡೆದವು ಮತ್ತೆ? 
  
         ನಾ ಆವಾಗಲೇ ಹೇಳಿದ್ನಲ್ಲೋ. ಆ ಪವಾಡಗಳೆಲ್ಲ ಬರಿ ಪುಸ್ತಕದಲ್ಲಿ ಇರೋದು. ನಾ ಯಾಕೆ ನಂಬಬೇಕು ಅದನ್ನೆಲ್ಲ. ಅಲ್ಲಿ ಬರೆದಿರೋದನ್ನ ನಂಬೋದು ನಿನ್ನ ಕರ್ಮ. Harry Potter ಪುಸ್ತಕದಲ್ಲಿರೋ ಪವಾಡಗಳೆಲ್ಲ ಅಷ್ಟೇ ರೋಚಕವಾಗಿದಾವೆ. ಹಾಗಂತ Harry Potter ನಿಜವಾಗಿ ನಡೆದದ್ದು ಅಂತ ನಂಬ್ತೀಯ? ಏನ್ ಮಾತೂ ಅಂತ ಅಂತ ಆಡ್ತೀ ಮಾರಾಯ, ತಗೋ ಇನ್ನೊಂದ್ ಪೆಗ್ಗು.
ಕೊನೇದಾಗಿ, ನಾನು ದೇವರನ್ನು ದ್ವೇಷಿಸೋಲ್ಲ. Exist ಇಲ್ಲದ ಯಾವುದನ್ನೂ ನೀವು ದ್ವೇಷಿಸಲಾರಿರಿ.