ಏಕೆ ಕೆಲವು ಜನರಷ್ಟೇ ನಾಸ್ತಿಕರು? ಏಕೆ ಬಹುತೇಕ
ಎಲ್ಲರೂ ದೇವರ ಇರುವಿಕೆಯನ್ನು ನಂಬುತ್ತಾರೆ?
ತುಂಬ
ಚಿಕ್ಕವರಿದ್ದಾಗ ಎಲ್ಲರಿಗೂ ಪಾಲಕರ ಮಾತೇ ವೇದವಾಕ್ಯ, ಅಂತಿಮ. ಇದು ನಿಜವೂ ಹೌದು, ಸರಿಯೂ ಹೌದು. ಸರಿ-ತಪ್ಪು,
ಒಳ್ಳೆಯದು-ಕೆಟ್ಟದ್ದು, ಉಪಕಾರಿ-ಅಪಕಾರಿ ಇವೆಲ್ಲವುಗಳ ನಡುವಿನ ವ್ಯತ್ಯಾಸ ಮೊದಲು ತಿಳಿಹೇಳುವುದು
ಪಾಲಕರು. ಪಾಲಕರ ಸಲಹೆ ಸೂಚನೆಗಳು ಯಾವಾಗಲು ನಂಬಲರ್ಹ ಎಂಬ ಭಾವನೆಯಲ್ಲೇ ಮಕ್ಕಳು ಬೆಳೆಯುತ್ತಾರೆ,
ಅದೇ ಭಾವನೆಯಲ್ಲೇ ಪಾಲಕರು ಮಕ್ಕಳನ್ನು ಬೆಳೆಸುತ್ತಾರೆ ಕೂಡ. ‘ಉರಿಯುತ್ತಿರುವ ದೀಪವನ್ನು ಮುಟ್ಟಬೇಡ,
ಮುಟ್ಟಿದರೆ ಕೈ ಸುಡುವುದು’ ಎಂದು ಹೇಳುವ ಅದೇ ಪಾಲಕರು, ‘ಪ್ರತಿದಿನ ದೇವರಿಗೆ ಕೈ ಮುಗಿದರೆ
ದೇವರು ಒಳ್ಳೆಯದು ಮಾಡುತ್ತಾನೆ’ ಎಂದೂ ಹೇಳುತ್ತಾರೆ. ಮಗು ಪಾಲಕರ ಮೊದಲನೇ ಹೇಳಿಕೆಯನ್ನು ಪರೀಕ್ಷಿಸಬಹುದು,
ಉತ್ತರ ಕಂಡುಕೊಳ್ಳಬಹುದು. ಆದರೆ ಎರಡನೆ ಹೇಳಿಕೆಯನ್ನು ಮಗು ಹೇಗೆ ಪರೀಕ್ಷೆ ಮಾಡೀತು? ದೇವರು
ನಿಜವಾಗಲು ಇರುವನೇ? ತಾನು ಇಲ್ಲಿ ದೇವರಿಗೆ ಕೈ ಮುಗಿದರೆ ಅದು ದೇವರಿಗೆ ಹೇಗೆ ಗೊತ್ತಾಗುವುದು
ಎಂದು ಮಗುವಿಗೆ ತಿಳಿಯುವುದು ಹೇಗೆ? ಇದರ ಪರೀಕ್ಷೆ ಹೇಗೆ? ಮಗುವಿಗೆ ಉತ್ತರ ಸಿಗುವುದಿಲ್ಲ. ಹೀಗಾಗಿ,
ದೀಪದ ಸುಡುವಿಕೆ ಎಷ್ಟು ವಾಸ್ತವವೋ, ದೇವರ ಕೃಪೆ ಕೂಡ ಅಷ್ಟೇ ವಾಸ್ತವವೆಂದು ಮಗು ನಂಬುತ್ತದೆ.
ಮೊದಲೇ ಹೇಳಿದಂತೆ ಪಾಲಕರ ಹೇಳಿಕೆ ಮಗುವಿಗೆ ಯಾವಾಗಲೂ ನಂಬಲರ್ಹ.
ಏಕೆ
ಪಾಲಕರು ದೀಪದ ಸುಡುವಿಕೆ ಎಂಬುದು ‘ವಾಸ್ತವ’, ದೇವರ ಇರುವಿಕೆ ಎಂಬುದು ‘ನಂಬಿಕೆ’ ಎಂದು ಹೇಳುವುದಿಲ್ಲ?
ಒಂದು ನಂಬಿಕೆಯು ಉಳಿಯಲು ಅದು ತಲೆತಲಾಂತರದ ಮೂಲಕ ಸಾಗಬೇಕು. ದೇವರ ಮೇಲಿನ ನಂಬಿಕೆ ಕೂಡ ಹಾಗೆಯೇ,
ಪಾಲಕರಿಂದ ಮಕ್ಕಳಿಗೆ ಸಾಗಿದ್ದು. ಇಲ್ಲಿ ನಂಬಿಕೆಯನ್ನು ಪ್ರಶ್ನಿಸಲು, ಪರೀಕ್ಷಿಸಲು ಅಧಿಕಾರವೂ
ಇಲ್ಲ, ಅವಕಾಶವೂ ಇಲ್ಲ. ಹಾಗಾಗಿ ನಂಬಿಕೆಗೆ ಸಾವಿಲ್ಲ. ಸಾವಿರ ವರ್ಷಗಳ ಹಿಂದೆಯೂ ಜನರು ದೇವರನ್ನು
ನಂಬಿದ್ದರು. ಇಂದಿಗೂ ನಂಬುತ್ತಾರೆ. ಆದರೆ ವಾಸ್ತವತೆ ಹಾಗಲ್ಲ. ವಾಸ್ತವತೆ ಸಾಗಲು ತಲೆತಲಾಂತರ
ಅಥವಾ ಇನ್ನಾವುದೇ ಮಾಧ್ಯಮದ ಅಗತ್ಯವಿಲ್ಲ. ನಂಬಿಕೆಯಂತೆ ವಾಸ್ತವವನ್ನು ಮನುಷ್ಯ ಸೃಷ್ಟಿಸಿದ್ದೂ
ಅಲ್ಲ.
ಒಮ್ಮೆ
ದೇವರ ಇರುವಿಕೆಯೆನ್ನು ನಂಬಲು ಶುರುಮಾಡಿದ ಮೇಲೆ, ಮಗು ತನ್ನ ಕಲ್ಪನಾ ಪ್ರಪಂಚವನ್ನು ಆ ನಂಬಿಕೆಯ
ತಳಹದಿಯ ಮೇಲೆಯೇ ಕಟ್ಟಲು ಶುರುಮಾಡುತ್ತದೆ. ತಾನು ಹುಟ್ಟಿದ್ದು, ಮಳೆ ಬರುವುದು, ಸೂರ್ಯ ಬೆಳಗುವುದು
ಎಲ್ಲವೂ ದೇವರ ಕೃಪೆಯಿಂದ ಎಂದೇ ನಂಬುತ್ತದೆ. ತನಗೆ ಒಳ್ಳೆಯದಾಗಬೇಕೆಂದು ದೇವರನ್ನು ಪೂಜಿಸಲು
ಆರಂಭಿಸುತ್ತದೆ. ಹೀಗೆ ಬೆಳೆದು ದೊಡ್ಡವನಾದ ಮೇಲೆ ಅವನ ವಿಶಾಲ ವ್ಯಕ್ತಿತ್ವದ ಬೇರುಗಳು
ಜೀವಿಸುವುದು ‘ದೇವರ ಇರುವಿಕೆಯ’ ನಂಬಿಕೆಯಲ್ಲಿ. ಅವನು ಮತ್ತೆಂದಿಗೂ ದೇವರ ಇರುವಿಕೆ ಎಷ್ಟು
ವಾಸ್ತವ ಎಂದು ಕೇಳುವ ಗೋಜಿಗೆ ಹೋಗುವುದಿಲ್ಲ. ದೇವರನ್ನು ಅವನು ಅಷ್ಟು ಬಲವಾಗಿ ನಂಬಿರುತ್ತಾನೆ. ಮುಂದೆ
ಮದುವೆಯಾಗಿ ಮಕ್ಕಳಾದ ಮೇಲೆ ಅವನು ತನ್ನ ಮಗುವಿಗೂ ತನ್ನ ನಂಬಿಕೆಯನ್ನು ಕಲಿಸುತ್ತಾನೆ. ಥೇಟ್ ಅವನ
ಪಾಲಕರು ಅವನಿಗೆ ಕಲಿಸಿದ ಹಾಗೆ!!
ಹೀಗಾಗಿ
ಬಹುತೇಕ ಎಲ್ಲರೂ ದೇವರನ್ನು ನಂಬುತ್ತಾರೆ. ಅವರ ಪ್ರಕಾರ ದೇವರನ್ನು ಧಿಕ್ಕರಿಸಿದರೆ ತಮ್ಮ ಪಾಲಕರನ್ನೇ
ಧಿಕ್ಕರಿಸಿದಂತೆ! ದೇವರನ್ನು ನಂಬದಿರಲು ಅವರಿಗೆ ಎಷ್ಟೇ ಕಾರಣಗಳು ಸಿಕ್ಕರೂ ಅವರಿಗೆ ದೇವರನ್ನು
ನಂಬದೇ ಇರಲು ಸಾಧ್ಯವಿಲ್ಲ. ಏಕೆಂದರೆ ದೇವರ ಅನುಪಸ್ತಿತಿ ಅವರ ವ್ಯಕ್ತಿತ್ವವನ್ನೇ ಅಲುಗಾಡಿಸಬಲ್ಲದು!!
ಹಾಗಾದರೆ ಇಲ್ಲಿ ನಂಬಿಕೆ ಯಾವುದು? ವಾಸ್ತವ ಯಾವುದು?
ದೇವರಿದ್ದಾನೆ ಎಂಬುವುದು ನಂಬಿಕೆ. ದೇವರಿಲ್ಲ
ಎಂಬುವುದು ವಾಸ್ತವ.
ದೇವರು ಅವರಿಗೆ ಒಳ್ಳೇದು ಮಾಡಲಿ!!
No comments:
Post a Comment